Wednesday, April 21, 2010

Chaha-kaapi puraNa

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ ??
ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ
ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ
ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ


ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ
ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು
ಎಲ್ಲಿ ಅಳುತ್ತವೆಯೇ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ
"ಓ ತರುಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು??? ................. ಎಂದು
ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ
ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು .


ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು
ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ .
ರಾಮರಾಜ್ಯದಲ್ಲಿ ಇದು ನ್ಯಾಯವೇ ?? ಎಂದು ಕೇಳಿದಾಗ ರಾಮ ಹೇಳಿದ "ಎಲೈ ಸಂಜೀವಿನಿಯೇ ಹೀಗೆ ಮರದ ಕೆಳಗೆ
ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ
ತಮ್ಮನ ಪ್ರಾಣ ಉಳಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ ಎಂದು
ಹರಸಿದ . ಅದರ ಅವತಾರವೇ ನಮ್ಮ ಕಲಿಯುಗದ ಚಹಾ .


ಇನ್ನೂ ಸಂಶಯವೇ ??? ನೋಡಿ ಈಗಲೂ ಅಷ್ಟೇ ..... ರಾತ್ರಿಯಿಡೀ ಮೂರ್ಛೆ ತಪ್ಪಿದವರಂತೆ ನಿದ್ದೆ ಬಿದ್ದಿರುವ ನಾವು
ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿದು ಕ್ರಿಯಾಶೀಲರಾಗುವುದಿಲ್ಲವೇ ?? ಅದರ ಕರ್ಮಫಲ ಇನ್ನೊ ಬಿಟ್ಟಿಲ್ಲವೋ ಎಂಬಂತೆ
ಚಹಾ ಮಾಡಿದ ಬಳಿಕ ಅದರ ಸೊಪ್ಪನ್ನು ಮರದ ಬೇರಿನಡಿ ಬಿಸಾಡುವುದಿಲ್ಲವೇ ?? ಅಷ್ಟೇ ಅಲ್ಲ ಸಂಜೀವಿನಿಯನ್ನು
ತಂದವನು ಹನುಮಂತ ಯಾವ ಮೂಲಿಕೆ ಎಂದು ತಿಳಿಯದಿದ್ದರೂ "ದೂರ ದೃಷ್ಟಿಯಿಂದ " ಇಡೀ ಪರ್ವತ ಹೊತ್ತು ತಂದ ಹಾಗೆ
ಭಾರತಕ್ಕೆ ಚಹಾ ತಂದವರು ಜೇಮ್ ಶೆಡ್ ಜೀ ಟಾಟಾ ಅವರು ಫಾರಸೀ ಆಗಿದ್ದರು. ನೋಡಿದಿರಾ ?? FAR = ದೂರ SEE
= ದೃಷ್ಟಿ . ಹೀಗೆ ಇವರು ಕೂಡ ದೂರ ದೃಷ್ಟಿ ಯಿಂದಲೇ ಚಹಾವನ್ನು ಭಾರತಕ್ಕೆ ತಂದರು . ಅಲ್ಲದೆ ರಾಮನು
ಕಾಡಿನಲ್ಲಿ ಈ ಸೊಪ್ಪಿಗೆ ವರದಾನ ಕೊಟ್ಟಿದ್ದರಿಂದ ಅವರು ತಂದ ಚಹಾಕ್ಕೆ "ಕಾನನ ದೇವನ ಚಹಾ " ( Kannan
Devan Tea ) ಅಂದರೆ ಕಾಡಿಗೆ ಹೋಗಿ ಬಂದ ದೇವರನ್ನು ಬದುಕಿಸಿದ ಸೊಪ್ಪು ಎಂಬರ್ಥದಿಂದ ಈ ಹೆಸರು ಕೊಟ್ಟರು.


ಇದು ಚಹಾದ ಪುರಾಣವಾದರೆ ಕಾಪಿ ಇದಕ್ಕೂ ಹಳೆಯದು . ಸಮುದ್ರಮಥನ ಕಾಲದಲ್ಲಿ ಸುರಾಸುರ ಯಕ್ಷ ಗಂಧರ್ವರೆಲ್ಲರೂ
ಸೇರಿ ಸಮುದ್ರವನ್ನು ಮಥಿಸಿದರು. ಅದರಲ್ಲಿ ಹುಟ್ಟಿದ ಪದಾರ್ಥವನ್ನೆಲ್ಲ ಪರಸ್ಪರ ಹಂಚಿಕೊಂಡರು. ನಡುವೆ "ಕಾಲಕೂಟ"
ವೆಂಬ ಖತರ್ನಾಕ್ ವಿಷ ಬರಲು ಈಶ್ವರ ಅದನ್ನು bottoms up ಮಾಡಿ ಕುಡಿದ. ನಂತರ ಪೀಯುಷ ( ಅಮೃತ )
ಹುಟ್ಟಿಕೊಂಡಿತು . ಅಸುರರಿಗೆ ಮೊಹಿನಿಯಿಂದ ಮಂಕುಬೂದಿ ಎರಚಿ ಇನ್ನೇನು ಪೀಯುಷವನ್ನು ಸ್ವರ್ಗಲೋಕಕ್ಕೆ
ತೆಗೆದುಕೊಂಡು ಹೋಗುವಾಗ "Hello Excuse me Boss " ಎಂಬ ಸ್ವರ ಕೇಳಿಸಿತು ತಿರುಗಿ ನೋಡಿದರೆ
ಮಾನವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನಾಯ್ತು ಎಂದು ಕೇಳಿದರೆ ಏನು ?? ನಮ್ಮ ಭೂಮಿಗೆ ಬಂದು
ಸಮುದ್ರ ಮಥಿಸಿ ಸಿಕ್ಕಿದ್ದನ್ನೆಲೆ ದೋಚಿ ಹೋಗ್ತಾ ಇದ್ದೀರಾ ?? ನಮ್ಮ ಭೂಮಿ ಬಳಸಿದ್ದರ ಬಾಡಿಗೆ ಯಾರು ಕೊಡ್ತಾರೆ ??
ನಮಗೂ ಅಮೃತದಲ್ಲಿ ಪಾಲು ಬೇಕು ಎಂದು ಎಲ್ಲರೂ ಜಗಳ ಶುರು ಮಾಡಿದರು . ಆಗ ದೇವರು ಓಹೋ .... ಅಮೃತ
ಬೇಕಾ ?? ಕಾಲಕೂಟ ಕೂಡ ಅಲ್ಲಿಂದಾನೆ ಬಂದಿದ್ದು ಅದನ್ನೂ ನೀವು ತೆಗೆದುಕೊಳ್ಳಬೇಕು ಎಂದು ವಾದ ಮಾಡಿದರು .
ಮನುಷ್ಯರು ಕಾಲಕೂಟದಿಂದ ಹೆದರಿಕೊಂಡರೂ ಪಾಲು ಸಿಗದೇ ಹೋಗಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು .


ಆಮೇಲೆ ದೇವಗುರು ಬೃಹಸ್ಪತಿ , ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮಾಸ್ಟರು
ಕುಳಿತು ಒಂದು ಸಂಧಾನಕ್ಕೆ ಬಂದು " ಕಾಲಕೂಟದಿಂದ " "ಕಾ" ತೆಗೆದು "ಪೀಯೂಷದಿಂದ" "ಪೀ " ತೆಗೆದು "ಕಾಪಿ
" ಮಾಡಿ ಮಾನವರಿಗೆ ಕೊಟ್ಟರು . ಈ ಸಂಧಾನದಲ್ಲಿ ಬೃಹಸ್ಪತಿಗಳು ಸ್ವಲ್ಪ ಮಾನವರ Favour ನಲ್ಲಿ
ಮಾತನಾಡಿದ್ದರಿಂದ ಅವರ ಸ್ಮರಣಾರ್ಥ ಅವರ ಹೆಸರಿನ ಮೊದಲ ಮೂರು ಅಕ್ಷರ "BRU" ಎಂದು ಇದಕ್ಕೆ ನಾಮಕರಣ
ಮಾಡಲಾಯಿತು . ಇದನ್ನು ಕುಡಿದು ಮನುಷ್ಯರಿಗೆ ನಶೆ ಏರಿದ್ದರಿಂದ ಅವರು ಅದನ್ನು "ನಶಾಕಾಪಿ " ಎಂದರು ಅದೇ
ಕಲಿಯುಗದ NESCAFE ಆಯಿತು.ಹೀಗೆ ಸುರ - ಅಸುರರ ಸಹಕಾರದಿಂದ ಕಾಪಿ ಭೂಮಿಗೆ ಬಂದಿದ್ದರಿಂದ ಇಂದಿಗೂ ಅದನ್ನು
ಕುಡಿಯುವಾಗ ನಾವು "ಸುರ್ರ್ ರ್ರ್ ರ್ರ್ " ಎಂದು ಶಬ್ದ ಮಾಡುತ್ತಾ ಅವರನ್ನು ನೆನೆಯುತ್ತೇವೆ


ಉಳಿದ ಪುರಾಣಗಳಲ್ಲಿ ಪೆಪ್ಸಿ ಕೋಲಾ ಗಳ ಉಲ್ಲೇಖ ಇದೆಯೋ ಎಂದು ಹುಡುಕುತ್ತಿದ್ದೇನೆ . ನಿಮಗೆಲ್ಲಾದರೂ ಏನಾದರೂ
ಮಾಹಿತಿ ಸಿಕ್ಕಿದರೆ ತಿಳಿಸಿರಿ .
-------------------------------ಅಥ ಶ್ರೀ ತಲೆಹರಟೆ ಪುರಾಣಂ ಸಂಪೂರ್ಣಂ---------

krupe : mail

No comments: